ನೀತಿಕಥೆ -
	ಪ್ರಧಾನವಾಗಿ ನೀತಿಯನ್ನು ಬೋಧಿಸುವ ಕಥೆಗೆ ಈ ಹೆಸರಿದೆ (ಫೇಬಲ್). ಸಂಸ್ಕøತದ ಪಂಚತಂತ್ರ ಹಾಗೂ ಹಿತೋಪದೇಶಗಳಲ್ಲಿರುವಂತೆ ಸಾಮಾನ್ಯವಾಗಿ ಪ್ರಾಣಿಕಥೆಗಳ ಮೂಲಕ ಇಲ್ಲಿ ನೀತಿಯನ್ನು ಬೋಧಿಸಲಾಗುತ್ತದೆ. ಈ ಕಥೆಗಳಲ್ಲಿ ಪ್ರಾಣಿಗಳಿಗೆ ಮನುಷ್ಯನ ಸ್ವಭಾವ ಹಾಗೂ ಮನೋಧರ್ಮವನ್ನೂ ಮಾತು ನಡತೆಗಳನ್ನೂ ಆರೋಪಿಸಲಾಗುತ್ತದೆ. ಮನುಷ್ಯಲೋಕದ ವ್ಯವಹಾರಗಳನ್ನು ಕುರಿತ ಕಥೆಗಳು ಪ್ಯಾರಬಲ್ (ರೂಪಕ ಕಥೆ) ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಗಾದೆಗಳಿಗೂ ನೀತಿಕಥೆಗಳಿಗೂ ಸಂಬಂಧ ಉಂಟು. ಗಾದೆಗಳು ಕೆಲವು ವೇಳೆ ನೀತಿಕಥೆಗಳ ಸಂಕ್ಷಿಪ್ತ ರೂಪವಾಗಿ ಇರುವುದುಂಟು. ಇಡೀ ಕಥೆಯ ಸಾರವನ್ನು ಒಂದು ಗಾದೆ ಹೇಳುತ್ತದೆ. ಬೌದ್ಧರ ಜಾತಕ ಕಥೆಗಳಲ್ಲಿ ಈ ರೀತಿ ಕಥೆಗಳನ್ನು ಹೇಳಿ, ಕೊನೆಯಲ್ಲಿ ಅದರ ನೀತಿಯ ಸಾರಾಂಶವನ್ನು ಗಾಥಾಪದ್ಯದಲ್ಲಿ ಭಟ್ಟಿ ಇಳಿಸಿರುತ್ತಾರೆ.

	ಕಥೆಗಳಲ್ಲಿ ನೀತಿ, ಉಪದೇಶ, ತತ್ತ್ವಬೋಧನೆಗಳು ಇದ್ದೇ ತೀರಬೇಕು. ಈಸೋಪನ ನೀತಿಕಥೆಗಳಲ್ಲಿ ನೀತಿಯನ್ನು ಬಿಡಿಸಿ ಹೇಳದಿದ್ದರೂ ಬರಿಯ ಕಥೆಯನ್ನು ಓದಿ ಮುಗಿಸುವಷ್ಟರಲ್ಲಿ ನೀತಿ ತಾನಾಗಿಯೇ ಬೋಧವಾಗುತ್ತದೆ.

	ಕನ್ನಡದಲ್ಲಿ ಪ್ರಖ್ಯಾತವಾದ ಪುಣ್ಯಕೋಟಿ ಎಂಬ ಗೋವಿನ ಕಥೆ ಈ ರೀತಿಯದೇ. ಕಾಗೆ ನರಿಯ ಕಥೆ, ತೋಳ ಕುರಿಮರಿಯ ಕಥೆ ಮುಂತಾದವು ಈ ಬಗೆಯವು.									(ಎಚ್.ಎಚ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ